ಹಿಮಾಲಯದ ಹಿಮಾನಿಗಳು

 	ಹಿಮಾಲಯ ಪರ್ವತಶ್ರೇಣಿಗಳಲ್ಲಿಯ ಹಿಮನದಿಗಳು (ಗ್ಲೇಷಿಯರ್ಸ್). ಇವು ಬಲುಮಟ್ಟಿಗೆ ಎತ್ತರದ ಪರ್ವತಪಂಕ್ತಿಗಳಲ್ಲಿ ಕಂಡುಬರುತ್ತವೆ. ಮುಖ್ಯ ಹಿಮನದಿಗಳು ದೊಡ್ಡ ದೊಡ್ಡ ಕಣಿವೆಗಳ ಮೂಲಕ ಪ್ರವಹಿಸುತ್ತವೆ. ಇವನ್ನು ಸೇರುವ ಉಪಹಿಮನದಿಗಳು ಈ ಕಣಿವೆಗಳ ಇಕ್ಕೆಲಗಳಲ್ಲಿ, ಸ್ವಲ್ಪ ಎತ್ತರದಲ್ಲಿರುವ ತೂಗುಕಣಿವೆಗಳ ಮುಖಾಂತರ ಹರಿದು ಮುಖ್ಯ ಹಿಮನದಿಯೊಡನೆ ಐಕ್ಯಗೊಳ್ಳುತ್ತವೆ. ಇಲ್ಲಿಯ ಹಿಮನದಿಗಳು ಗಾತ್ರದಲ್ಲಿ ಒಂದೇ ಸಮವಾಗಿಲ್ಲ. ಇವು ವೈವಿಧ್ಯಪೂರ್ಣ. ಕೆಲವು ಒಂದೆರಡು ಕಿಮೀಗಳಷ್ಟು ಉದ್ದವಿದ್ದರೆ ಇನ್ನು ಕೆಲವು ಸುಮಾರು 50-60 ಕಿಮೀ ಉದ್ದಕ್ಕೂ ಚಾಚಬಹುದು. ಸಾಮಾನ್ಯವಾಗಿ ಪರ್ವತಶ್ರೇಣಿಯ ಎತ್ತರ ಭಾಗಗಳಿಗೆ ಹೋದಂತೆಲ್ಲ ದೊಡ್ಡ ದೊಡ್ಡ ಹಿಮನದಿಗಳು ಕಂಡುಬರುತ್ತವೆ. ಇವುಗಳಲ್ಲಿ ಮುಖ್ಯವಾದವು: ಕಾರಾಕೋರಮ್ ಶ್ರೇಣಿಯ ಸಿಯಾಷೆನ್ (ಸು. 65 ಕಿಮೀ ಉದ್ದ), ಹಿಸ್ಪಾರ್ (ಸು. 57 ಕಿಮೀ), ಬಿಯಾಫೊ (55 ಕಿಮೀ), ಬಾಲ್‍ಟೊರೊ (54 ಕಿಮೀ) ಬಟುರಾ (54 ಕಿಮೀ), ಪಂಜಾಬಿನ ರಿಮೊ (37 ಕಿಮೀ), ಪೂನ್‍ಮ್ಹಾ (25 ಕಿಮೀ), ರೂಪಲ್ (16 ಕಿಮೀ), ಸೋನಾಪಾನಿ ಮತ್ತು ಡಿಯಾಮಿರ್ (25 ಕಿಮೀ), ಇವಲ್ಲದೆ ಕುಮಾವುನ್ ಪ್ರಾಂತ್ಯದ ಗಂಗೋತ್ರಿ (24 ಕಿಮೀ), ಮಿಲಮ್ (16 ಕಿಮೀ), ಕೋಸ (11 ಕಿಮೀ), ಕೇದಾರ್‍ನಾಥ (14 ಕಿಮೀ), ಮತ್ತು ನೇಪಾಲದ ಜೆಮು (24 ಕಿಮೀ), ಕಾಂಚನಗಂಗಾ (16 ಕಿಮೀ) ಇವನ್ನೂ ಹೆಸರಿಸಬಹುದು.

	ಹಿಮನದಿಗಳ ಗಾತ್ರಕ್ಕೆ ಅನುಗುಣವಾಗಿ ಅವುಗಳ ಮಂದ ಕೂಡ ವ್ಯತ್ಯಾಸಗೊಳ್ಳುತ್ತದೆ. ದೊಡ್ಡ ದೊಡ್ಡ ಹಿಮನದಿಗಳ ಮಂದ ಹೆಚ್ಚು. ಉದಾಹರಣೆ ಫೆಡ್‍ಷೆಂಕೊ ಹಿಮನದಿಯ ಮಂದ ಸು. 549 ಮೀ. ಗಾತ್ರದಲ್ಲಿ ಇದಕ್ಕಿಂತಲೂ ಕಿರಿದಾದ ಜೆಮು ಸು. 103 ಮೀ. ಗಳಷ್ಟೂ, ಬಾಲ್ಟೋರೋ ಸು. 122 ಮೀ. ಗಳಷ್ಟೂ ಮಂದವಾಗಿವೆ. ಈ ಹಿಮನದಿಗಳು ಬಲು ನಿಧಾನವಾಗಿ ಪ್ರವಹಿಸುತ್ತವೆ (ವೇಗ ದಿನಕ್ಕೆ ಸು. 2.5-90 ಸೆಂಮೀ). ಸಾಮಾನ್ಯವಾಗಿ ಗಾತ್ರದಲ್ಲಿ ಕಿರಿದಾದ ಉಪಹಿಮನದಿಗಳ ಪ್ರವಾಹವೇಗ ಮುಖ್ಯ ಹಿಮನದಿಗಳ ವೇಗಕ್ಕಿಂತಲೂ ಹೆಚ್ಚು.

	ಹಿಮಾಲಯದಲ್ಲಿ ಹುಟ್ಟುವ ಸಿಂಧೂ, ಗಂಗಾ, ಯಮುನಾ ಮತ್ತು ಬ್ರಹ್ಮಪುತ್ರ ಮೊದಲಾದ ನದಿಗಳಿಗೆಲ್ಲ ಈ ಹಿಮನದಿಗಳೆ ಮುಖ್ಯ ಆಗರ. ಇವನ್ನು ಪ್ಲೀಸ್ಟೊಸೀನ್ ಹಿಮಕಲ್ಪದ ಅವಶೇಷಗಳೆಂದು ಪರಿಗಣಿಸಲಾಗಿದೆ. ಪ್ರಸಕ್ತ ಇವು ಕ್ರಮೇಣವಾಗಿ ಕೊನೆಮುಟ್ಟುತ್ತಿವೆ ಯೆಂಬುದು ಭೂವಿಜ್ಞಾನಿಗಳ ಅಭಿಪ್ರಾಯ.

 	ಹಿಮನದಿಗಳ ಹೆಚ್ಚಿನ ಭಾಗ ಮೊರೇನು ಮತ್ತು ಶಿಲಾವಸ್ತುಗಳಿಂದ ಮುಚ್ಚಿಹೋಗಿದೆ. ಇವನ್ನು ಕುರಿತು ಮಾಂಗೊಮರಿ, ಕಾಸ್ವೆ, ಲಾಂಗ್‍ಸ್ಟಾಫ್, ಡಿಫಿಲಿಸ್, ಮೇಸನ್ ಮೊದಲಾದ ವಿಜ್ಞಾನಿಗಳೂ ಭಾರತ ಭೂಶೋಧನ ಸಂಸ್ಥೆಯವರು ವಿಶೇಷ ಅಧ್ಯಯನ ನಡೆಸಿದ್ದಾರೆ.									
	(ಬಿ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ